ಪುಸ್ತಕದ ಶೀರ್ಷಿಕೆ: ಉದಕ ಉರಿದು
ಪುಸ್ತಕದ ಲೇಖಕರು: ಶ್ರೀಹರ್ಷ ಸಾಲಿಮಠ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ವಸುಧಾ ರಾವ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಉದಕ ಹುರಿದು ಎನ್ನುವ ಶೀರ್ಷಿಕೆಯ ಕಥಾ ಸಂಕಲನವು ಹಲವು ಬಗೆಯ ಹೂವುಗಳ ಹೂಗುಚ್ಛದಂತಿದೆ. ಒಂದೊಂದು ಕಥೆಯು ಅದರದೇ ಆದ ವೈಶಿಷ್ಟ್ಯಗಳನ್ನು ಪಾತ್ರಗಳನ್ನು ಕಥಾಹಂದರವನ್ನು ಹೊಂದಿದೆ. ಇವುಗಳಲ್ಲಿ- ದೊಡ್ಡಪ್ಪ ಹೋಗ್ತಾನ, ಗುತ್ತೇಪ್ಪನವರ ಮನೆಗೆ ಗಣಪ ಬಂದದ್ದು, ಬಿಳಲು ಬೇರು, ಉಡಾಳ ಬಸ್ಯಾನ ಖೂನಿ, ಗಂಧಕ್ಕೊಂದು ಬರೆ, ಸದ್ಗತಿ ಎಂಬ ಕಥೆಗಳು ಅಪ್ಪಟ ಗ್ರಾಮ ಜೀವನದ ಚಿತ್ರಣಗಳು. ದೊಡ್ಡಪ್ಪ ಹೋಗ್ತಾನ ಎಂಬ ಕತೆಯಲ್ಲಿ ಸಾವಿನ ಬರುವಿಕೆಯನ್ನೇ ಕಾಯುವ ದೂರದ ಸಂಬಂಧಿ ಓಂಕಾರಪ್ಪಜ್ಜ ಸಾವಿಗೆ ಕಾಯುತ್ತಲೇ ತನ್ನ ಮಗನ ಮೇಲೆ ಕೋಪವನ್ನು ಪರೋಕ್ಷವಾಗಿ ತೀರಿಸಿಕೊಳ್ಳುವುದು ಹಾಸ್ಯವನ್ನು ತರಿಸುತ್ತದೆ. ಈ ಕಥೆಯಲ್ಲಲ್ಲದೆ ಬೇರೆಡೆಯೂ ತಮಗೆ ಆದ ಅನ್ಯಾಯಗಳ ಬಗೆಗೆ ಇರುವ ಕೋಪವನ್ನು, ವರ್ಷಗಟ್ಟಲೆ ಅದುಮಿಟ್ಟ ಒಳಕುದಿಯನ್ನು ತೀರಿಸಿಕೊಳ್ಳುವ ಬಗೆಗಳು ಚಿತ್ರಿತವಾಗಿದೆ. ಜಮೀನನ್ನು ಮೋಸದಲ್ಲಿ ಕಸಿದುಕೊಂಡ ಮೈದುನ ಬಸವೆಣ್ಣಪ್ಪನಿಗೆ ಸತ್ತಾಗ ನಾಲ್ಕು ಮಂದಿ ಮಣ್ಣು ಹಾಕಲು ಸಿಗದೇ ಇರಲಿ ಎಂಬ ಯಾರಮ್ಮನ ಶಾಪ ಫಲಿಸಿ ‘ಪೊಯಟಿಕ್ ಜಸ್ಟೀಸ್’ ಎಂಬ ಬಗೆಯಲ್ಲಿ ಕಥೆ ಅಂತ್ಯವಾಗುತ್ತದೆ. ಬಿಳಲು ಬೇರು ಎಂಬ ಕಥೆಯಲ್ಲಿಯೂ ವೇದಮೂರ್ತಿಗಳ ಜನಪರ ಕಾರ್ಯದ ಬಗೆಗೆ ಹೀಯಾಳಿಸಿದ ತಮ್ಮನಿಗೂ, ಕಥೆಯ ಕೊನೆಯಲ್ಲಿ 50 ಬಿಸಿ ಬಿಸಿ ನೀರಿನ ಬಕೆಟ್ಗಳು ಸಾಲದೆ ಸ್ನಾನ ಮಾಡುವ ‘ಮಹಾರಾಜ’ ಎಂಬ ಅಡ್ಡ ಹೆಸರು ಉಳ್ಳ ಕಕ್ಕನಿಗೂ ಕುಟುಂಬದ ಯುವಕನೊಬ್ಬ ಕೊನೆಗೂ ಎದುರು ಹಾಕಿಕೊಳ್ಳುವುದು, ಊರಿನ ತುಂಬಾ ತನ್ನ ಅಶ್ಲೀಲ ಮಾತುಗಳು ಹಾಗೂ ಕೆಲಸಗಳಿಂದ ಎಲ್ಲರನ್ನು ಉಪದ್ರವಿಸುವ ಉಡಾಳ ಬಸ್ಯಾ ಕೊನೆಗೆ ದಾರುಣವಾಗಿ ಖೂನಿಯಾಗುವುದು, ನ್ಯಾಯಾನ್ಯಾಯದ ಮೌಲ್ಯವನ್ನು ಎತ್ತಿ ಹಿಡಿಯುವುದಲ್ಲದೆ, ಕಥಾ ಹಂದರವು ಅನ್ಯಾಯ ಮಾಡಿದವರ ವಿರುದ್ಧ ಅನೇಕ ರೀತಿಯಲ್ಲಿ ನ್ಯಾಯವನ್ನು ಒದಗಿಸುವುದು. ಕೋಪವು ಎಲ್ಲೂ ಸ್ವಾಗತಾರ್ಹವಾದ ಭಾವನೆಯಲ್ಲ ಎಂಬ MORAL VANITY ಹಾಗೂ SOCIAL INVALIDATION ನ ನಡುವೆ ಈ ಕಥೆಗಳ ಅಂತ್ಯಗಳು ಒಂದು ಬಗೆಯ CATHARSIS ಆಗಿರುತ್ತವೆ. ಅನ್ಯಾಯ ಮಾಡಿದವರ ಕೃತ್ಯಗಳು ಎಷ್ಟೇ ತೀಕ್ಷ್ಣವಾಗಿದ್ದರೂ ಅನ್ಯಾಯ ಸಹಿಸಿಕೊಂಡವರು ತಾಳ್ಮೆಯಿಂದಲೂ ಕ್ಷಮೆಯಿಂದಲೂ ಮನೋವೈಶಾಲ್ಯದಿಂದಲೂ ವರ್ತಿಸಬೇಕೆಂಬ ಸಾಮಾಜಿಕ ಹೇರಿಕೆಯಿಂದ ಈ ಕಥಾ ಪಾತ್ರಗಳು ಮುಕ್ತಿಗೊಂಡಿವೆ. ತಾವು ಕೂಡ ಒಂದು ದಿನ ಕೃಶರಾಗುತ್ತೇವೆ, ಮುದಿಯರಾಗುತ್ತೇವೆ, ಅವಲಂಬಿತರಾಗುತ್ತೇವೆ ಎಂದು ಮರೆತು ದರ್ಪದಿಂದ ಮೆರೆಯುವ ಕಥಾ ಪಾತ್ರಗಳು ಇಲ್ಲಿ ಹಲವು. ಗಂಧಕ್ಕೊಂದು ಬರೆ ಎಂಬ ಕಥೆಯು ಸಾಮಾಜಿಕ ವ್ಯವಸ್ಥೆಯ ಲೋಪಗಳಿಗಾಗಿ ಸದ್ವಕ್ತಿಗಳನ್ನು ಬಲಿಕೊಡುವ ಬಗೆಯನ್ನು ಚಿತ್ರಿಸುತ್ತದೆ. ‘ಸಂಕೋಲೆಯೂ ಸರಕು’ ಎಂಬ ಕಥೆಯು ಮನೋವೈದ್ಯರು ಹಾಗೂ ಮನೋಚಿಕಿತ್ಸಕರು ಓದಬೇಕಾದಂತದ್ದು. ಸ್ಕಿಜೋಪ್ರೇನಿಯಾ ಖಾಯಿಲೆಯುಳ್ಳ ಓರ್ವ ಸೊಸೆಯನ್ನು ಕುಟುಂಬವು ತನ್ನ ಲಾಭಕ್ಕಾಗಿ ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ಚಿತ್ರಿಸಲಾಗಿದೆ. ಕಥೆಯ ಶೀರ್ಷಿಕೆ ಕಥೆಗೆ ತಕ್ಕದಾಗಿದೆ. ಇಡಿಪಸ್ ಕಾಂಪ್ಲೆಕ್ಸ್ ನೆನಪಿಸುವಂಥ ಕಥೆಯೇ ‘ಅನಾವೃತ ಜಗಜ್ಜನನಿ’. ವಿಚಿತ್ರವಾಗಿಯೂ ಅಪೂರ್ಣವಾಗಿಯೂ ಭಾಸವಾಗುವ ಕಥೆ. ‘ಬೇರಿಗಿದೆ ಕುರುಹು’ ಎಂಬ ಕಥೆಯು ಆಸ್ಟ್ರೇಲಿಯಾದ ಮೂಲ ನಿವಾಸಿಗಳಾದ ಅಬಾರಿಜೈನ್ ನಾಯಕ ಬಲುದರ್ರಿಯ ಕಥೆ. ಲೇಖಕರು ಐತಿಹಾಸಿಕ ವೃತ್ತಾಂತವನ್ನು ಕ್ರಿಯಾತ್ಮಕವಾಗಿ ಮರು ಸೃಷ್ಟಿಸಿದ್ದಾರೆ. ಮೂಲ ನಿವಾಸಿಯಾದ ಬಲುದರ್ರಿ ಹಾಗೂ ಬ್ರಿಟಿಷ್ ಮೂಲದ ಅಧಿಕಾರಿ ಕ್ಯಾಪ್ಟನ್ ಫಿಲಿಪ್ ಇವರ ನಡುವಿನ ಸ್ನೇಹ ಹಾಗೂ ವಿಶ್ವಾಸಗಳನ್ನು ಚಿತ್ರಿಸಲಾಗಿದೆ. ವಸಾಹತು ಶಾಹಿಯ ಮಿತಿಮೀರಿದ ಕ್ರೌರ್ಯ ಕ್ಯಾಪ್ಟನ್ ಫಿಲಿಪ್ನಲ್ಲಿ ಹೊರಬರದೆ ಇದ್ದರೂ, ಮೂಲ ನಿವಾಸಿಗಳು ಅನಾಗರಿಕರು ಹಾಗೂ ಪಶ್ಚಿಮಾತ್ಯ ಶಿಕ್ಷಣ ದೊರೆತರೆ ಮಾತ್ರ ನಾಗರೀಕರಾಗುತ್ತಾರೆ ಎಂಬ ವಸಾಹತುಶಾಹಿಯ ಕೊಳೆತ ಚಿಂತನೆಯನ್ನು ಫಿಲಿಪ್ ಕೂಡ ಪ್ರದರ್ಶಿಸುತ್ತಾನೆ. ತಮ್ಮಂತೆ ಇಲ್ಲದವರನ್ನು ಅನಾಗರಿಕರು ಎಂದು ಬಗೆಯುವ ವಸಾಹತುಶಾಹಿಯ ಮೂಲ ದೃಷ್ಟಿಕೋನವನ್ನು ಈ ಕಥೆ ಬಿಂಬಿಸುತ್ತದೆ. ‘ಉದಕ ಉರಿದು’ ಎಂಬ ಕಥೆಯು ತಮ್ಮ ನಾಡಿನಿಂದ ನಿರ್ಗತಿಕರಾಗಿ ಹೊರ ಬಿದ್ದು ರೆಫ್ಯೂಜಿ ಎನಿಸಿಕೊಂಡು ಬದುಕುವ ಜನರ ವ್ಯಥೆಯನ್ನು ಅರುಹುವ ಕಥೆ, ಜಾಗತಿಕ ರಾಜಕಾರಣದಲ್ಲಿ ಬರೇ ದಾಳಗಳಾಗುವ ಸಾಮಾನ್ಯ ಜನರ ಕಥೆ. ‘ಉಡಾಳ ಬಸ್ಯಾನ ಖೂನಿ’ ಬಹುಶಃ ಈ ಕಥಾಸಂಕಲನದ ಅತ್ಯುತ್ತಮ ಕತೆ ಎನ್ನಬಹುದು. ವಿಕೃತ ಕಾರ್ಯಗಳಿಂದ ತನ್ನನ್ನು ಅಜೇಯನನ್ನಾಗಿ ಮಾರ್ಪಡಿಸಿಕೊಳ್ಳುವ ಬಸ್ಯಾ, ಸಭ್ಯನಾದ ಮೇಲೆ ಹೆಣ್ಣು ತಾನಾಗೇ ಒಲಿದು, ಅವನನ್ನು ‘ಆಟಿಕೆಯಂತೆ ಒಮ್ಮೆ ಆಡಿ ಬಿಸಾಕಿದ’ ಮೇಲೆ ಹೆಣ್ಣು ಗಂಡುಗಳ ಶಕ್ತಿ ಪೈಪೋಟಿಯಲ್ಲಿ ತಾನು ಗಂಡಸು- ನಾಯಿಗೆ ಸಮಾನ ಎಂದು ಕುಡಿದ ಮತ್ತಿನಲ್ಲಿ ಸಾಕ್ಷಾತ್ಕರಿಸಿಕೊಂಡು, ಕೊನೆಯಲ್ಲಿ ಖೂನಿಯಾಗುತ್ತಾನೆ. ಜಾತಿ ರಾಜಕಾರಣದ ಸೂಕ್ಷ್ಮ ವಿಡಂಬನೆಯು ಗುತ್ತೆಪ್ಪನ ಕತೆಯಲ್ಲೂ, ವೇದಮೂರ್ತಿಯವರ ಕುಟುಂಬ ಚಿತ್ರಣದಲ್ಲೂ ಒಸರುತ್ತದೆ. ಕೆಲವು ಕತೆಗಳು ತಟ್ಟನೆ ಅಂತ್ಯವಾದರೆ, ಬಿಳಲು ಬೇರು ಕತೆಯು ನೀಳವಾಗಿ ಹರಿದಾಡಿವೆ. ಕತೆಗೊಂದು ನಿರ್ದಿಷ್ಟ ಹಂದರ, ಅಂತ್ಯ ಇರಲೇಬೇಕು ಎಂಬ ಸಾಮಾನ್ಯ ಕಟ್ಟಳೆಯನ್ನು ಮೀರಿದವು. ಕತೆಗಳ ಭಾಷೆಯು ಹಲವೆಡೆ ಗ್ರಾಮ್ಯ-ಅವಾಚ್ಯ-ಶಿಷ್ಟ ಹಾಗೂ ಇಂಗ್ಲೀಷ ಪದಗಳ ಮಿಶ್ರಣದಿಂದ ಕಟುಹಾಸ್ಯದ ಅನುಭವವನ್ನು ನೀಡುತ್ತವೆ. ಗುತ್ತೆಪ್ಪನವರ ಮನೆದೇವತೆ ‘ದುರ್ಗಮ್ಮ’ ಕೊನೆಯಲ್ಲಿ ‘ದುರ್ಗಾಂಬಿಕಾ ದೇವಿ’ಯಾಗುವುದು, ಮನೆಯಿಂದ ನಿರ್ಗಮಿಸುವುದು ಹಾಸ್ಯಾಸ್ಪದವಾಗಿಯೂ ವಿಡಂಬನೆಯಾಗಿಯೂ ಏಕಕಾಲದಲ್ಲಿ ಅನಿಸುತ್ತದೆ. ಶ್ರೀಹರ್ಷ ಸಾಲಿಮಠ ಅದ್ಭುತ ಕತೆಗಳನ್ನು ಹೆಣೆಯಬಲ್ಲವರು ಎಂಬುದನ್ನು ಈ ಸಂಕಲನ ಸಾದರಪಡಿಸುತ್ತದೆ. ಇವರ ಸಾಹಿತ್ಯ ಸೇವೆಗಾಗಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿಯು ೨೦೨೫ರಲ್ಲಿ ಲಭಿಸಿದೆ. ಇನ್ನೂ ಬೌದ್ಧಿಕ ತೀಕ್ಷ್ಣತೆಯ, ಭಾವ ಸಾಂದ್ರತೆಯ ಕೃತಿಗಳು ಇವರಿಂದ ಹೊರಹೊಮ್ಮಲಿ ಎಂಬ ಹಾರೈಕೆಗಳು.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಹಲವು ಜವಾರಿ ಕಥೆಗಳು. ಮನರಂಜನೆ ಗಾಗಿ ಹಾಗೂ ಗಂಭೀರ ಓದು, ಎರಡಕ್ಕೂ ಸೂಕ್ತ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.