ಪುಸ್ತಕದ ಶೀರ್ಷಿಕೆ: ಬೆಟ್ಟದ ಜೀವ
ಪುಸ್ತಕದ ಲೇಖಕರು: ಡಾ.ಶಿವರಾಮ ಕಾರಂತ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸಂಧ್ಯಾ ಭಟ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಪ್ರಕಾರ : ಕಾದಂಬರಿಯ ಪಾತ್ರ ವಿಮರ್ಶೆ ಕಾದಂಬರಿ : 'ಬೆಟ್ಟದ ಜೀವ' 'ಬೆಟ್ಟದಲ್ಲೊಂದು ಗಟ್ಟಿ ಜೀವ' ಡಾ.ಶಿವರಾಮ ಕಾರಂತರ ‘ಬೆಟ್ಟದ ಜೀವ’ (1943) ಅವರ ಪ್ರಮುಖ ಕಾದಂಬರಿಗಳಲ್ಲಿ ಒಂದು. “ಗಟ್ಟಿಯಾದ ಅನುಭವಗಳು, ಪ್ರಬುದ್ಧ ದೃಷ್ಟಿಕೋನ, ಪ್ರಾಮಾಣಿಕತೆ, ನಿರ್ಭೀತಿಯ ನಿಲುವುಗಳಿಂದಾಗಿ ಮಾತ್ರವಲ್ಲ... ಕಥಾವಸ್ತು, ನಿರೂಪಣೆ ಹಾಗೂ ಸೂಕ್ಷ್ಮಭಾವಗಳ ಅಭಿವ್ಯಕ್ತಿಯಿಂದಲೂ 'ಬೆಟ್ಟದ ಜೀವ’ ವಿಶೇಷವೆನಿಸುತ್ತದೆ. ಬಂದದ್ದನ್ನೆಲ್ಲವನ್ನೂ ಸ್ಥಿತಪ್ರಜ್ಞೆಯಿಂದ ಸ್ವಾಗತಿಸುತ್ತಾ, ಕಾಡು, ನದಿ, ಬೆಟ್ಟ ಬಯಲು, ಪ್ರಾಣಿಗಳು... ಎಂದೆಲ್ಲಾ ನಿಸರ್ಗದ ಭಾಗವಾಗಿ ಬದುಕುವುದರಲ್ಲೇ ಸಾರ್ಥಕ್ಯ ಕಾಣುವ ಅಸಂಖ್ಯ ‘ಬೆಟ್ಟದ ಜೀವ’ಗಳ ಪ್ರತಿನಿಧಿಯೇ ಈ ಕಾದಂಬರಿಯ ಪ್ರಮುಖ ಪಾತ್ರ ಗೋಪಾಲಯ್ಯ... ಇದು ಗೋಪಾಲಯ್ಯನ ವೈಯುಕ್ತಿಕ ಜೀವನದ ಕಥನ ಮಾತ್ರವಲ್ಲ... ಕಾಡ ಮೂಲೆಗಳಲ್ಲಿ ಕೃಷಿಯನ್ನೇ ನಂಬಿ ಬದುಕುವ ಜೀವನ ಶೈಲಿಯೊಂದರ ಯಥಾರ್ಥ ನಿರೂಪಣೆಯೂ ಹೌದು. ಹಾಗಾಗಿಯೇ ಕಾದಂಬರಿ ಆಪ್ತವಾಗುತ್ತದೆ. ಕಾದಂಬರಿಯ ಜೀವನಾಡಿಯೇ ಗೋಪಾಲಯ್ಯ. ಬೆಟ್ಟದಲ್ಲಿ ಹುಟ್ಟಿ, ಬೆಟ್ಟದಲ್ಲಿಯೇ ಕಲಿತು, ಬೆಟ್ಟದಲ್ಲೇ ಬೆಳೆದು, ಅದರ ಜೊತೆಗೆ ಸೆಣಸಿ ತನ್ನ ಜೀವನವನ್ನು ಅದರ ಜೊತೆಗೇ ಬೆಸೆದು ದೃಢವಾಗಿ ನಿಲ್ಲುವ ಪರಿ.... ಓದುಗರ ಮನದಲ್ಲಿ ಅದ್ಭುತ ಸಾಹಸವೊಂದರ ಛಾಪನ್ನೊತ್ತಲು ಯಶಸ್ವಿಯಾಗುತ್ತದೆ. ಮಾನವ ಮತ್ತು ನಿಸರ್ಗ ಪರಸ್ಪರ ಶತ್ರುಗಳೂ ಹೌದು. ಮಿತ್ರರೂ ಹೌದು. ಅಪರಿಮಿತ ಕೆಚ್ಚು, ಇಚ್ಛಾಶಕ್ತಿಗಳ ಜೊತೆಗೆ ಸ್ವಹಿತಾಸಕ್ತಿಯ ಹೋರಾಟದಲ್ಲೂ ನಿಸರ್ಗವನ್ನು ಕಾಳಜಿಯಿಂದಲೂ ಎಚ್ಚರಿಕೆಯಿಂದಲೂ ನಿಭಾಯಿಸುವ ಜವಾಬ್ದಾರಿಯನ್ನು ಮರೆಯದಿರುವುದೇ ಗೋಪಾಲಯ್ಯನವರ ವೈಶಿಷ್ಟ್ಯ. ಸಂಘರ್ಷದಲ್ಲಿ ಗೆಲುವಿನ ಖಾತ್ರಿಯಿಲ್ಲದಿದ್ದರೂ ಅಸ್ತಿತ್ವಕ್ಕಾಗಿ ಅವರ ಹೋರಾಟ ಮಾತ್ರ ನಿರಂತರ... ಗೋಪಾಲಯ್ಯ ಮಗನ ವಿಚಾರದಲ್ಲಿ ಅನುಭವಿಸುವ ನೋವಿನ ಹಿನ್ನೆಲೆಯಲ್ಲಿರುವಂತದ್ದು... ಆಧುನಿಕ ಸಮಾಜದಲ್ಲಿ ಬದಲಾಗುತ್ತಿರುವ ಜೀವನಶೈಲಿ, ಮೌಲ್ಯಗಳು... ಅಸ್ತವ್ಯಸ್ತವಾಗುತ್ತಿರುವ ಕುಟುಂಬ ವ್ಯವಸ್ಥೆ ಹಾಗೂ ಬದಲಾಗುತ್ತಿರುವ ದೃಷ್ಟಿಕೋನಗಳು... ಇತ್ಯಾದಿ. ಇಂದಿಗೂ ಜೀವಂತವಾಗಿರುವ ಈ ಸಮಸ್ಯೆಗಳ ವಿವಿಧ ಆಯಾಮಗಳು ಗೋಚರವಾಗುತ್ತಲೇ ಇವೆ. ಹಾಗಾಗಿಯೇ ಗೋಪಾಲಯ್ಯನ ಪಾತ್ರ ಸೃಷ್ಟಿಯಾಗಿ ಹಲವು ದಶಕಗಳೇ ಕಳೆದಿದ್ದರೂ ಇಂದಿಗೂ ಅವರು ಪ್ರಸ್ತುತವಾಗುತ್ತಾರೆ. ಕಾದಂಬರಿಯ ನಿರೂಪಕ ಶಿವರಾಮಯ್ಯ ಕಾಡಿನ ಮಧ್ಯೆ ದಾರಿ ತಪ್ಪಿ ಗೋಪಾಲಯ್ಯನ ಮನೆಗೆ ಬರುತ್ತಾರೆ. ಅಲ್ಲಿ ಆತ ಕಳೆಯುವ ಕೆಲವು ದಿನಗಳ ವಾಸದಲ್ಲಿ ಅಪರಿಚಿತನನ್ನೂ ಆದರದಿಂದ ಉಪಚರಿಸುವ ಗೋಪಾಲಯ್ಯನ ಬದುಕಿನ ಕಥನ ತೆರೆದುಕೊಳ್ಳುತ್ತಾ ಸಾಗುತ್ತದೆ. ಅಕಾಲದಲ್ಲಿ ದೇವರ ಪಾದ ಸೇರಿದ ಮಗಳು, ಮನೆ ಬಿಟ್ಟು ಹೋಗಿರುವ ಮಗನಿಂದಾಗಿ ಗೋಪಾಲಯ್ಯ ಶಂಕರಿ ದಂಪತಿಯ ನೋವು, ಒದ್ದಾಟಗಳು... ಗೋಪಾಲಯ್ಯ ಕಾಡಿನ ಮಧ್ಯೆ ಕಟ್ಟಿಕೊಂಡ ಜೀವನ... ಅನಾಥನಾದ ನಾರಾಯಣನಿಗೆ ತಾನು ಕಷ್ಟಪಟ್ಟು ಹಸನುಗೊಳಿಸಿದ ಜಮೀನು ವಹಿಸಿ, ಮದುವೆಯೂ ಮಾಡಿ, ಅವರನ್ನು ವಿಶ್ವಾಸದಿಂದ ನಡೆಸಿಕೊಳ್ಳುವ ರೀತಿ... ಇತ್ಯಾದಿಗಳು ವಿಧಿಯೆಸೆಯುವ ಸವಾಲನ್ನು ಪ್ರಬುದ್ಧವಾಗಿ ನಿಭಾಯಿಸುವ ಅವರ ಪರಿಪಕ್ವ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತವೆ. ವೃದ್ಧಾಪ್ಯದಲ್ಲೂ ಗೋಪಾಲಯ್ಯನವರ ಶಾರೀರಿಕ ಕ್ಷಮತೆ, ಶ್ರಮದ ದುಡಿಮೆ, ಜೀವನೋತ್ಸಾಹ ಸಣ್ಣಪುಟ್ಟ ಕಷ್ಟಗಳಿಗೆ ಕುಗ್ಗುವ ಇಂದಿನ ಯುವಕರಿಗೆ ಅನುಕರಣೀಯ. ಪ್ರಕೃತಿಯ ರುದ್ರ ರಮಣೀಯತೆಯಿಂದ ರೋಮಾಂಚನಗೊಳ್ಳುವ ಶಿವರಾಮನಿಗೆ ಒಮ್ಮೆ ಗೋಪಾಲಯ್ಯ ಹೇಳುತ್ತಾರೆ, “ಎತ್ತರದ ಗುಡ್ಡದ ತುದಿಯನ್ನೇರಿದರೆ ಮನಸ್ಸಿಗೊಂದು ಹಿಗ್ಗು ಬರುವುದಿಲ್ಲವೇ? ನೂರಾರು ಕಿರಿಯ ಜನರನ್ನು ಮೀರಿ ನಿಂತಂತೆ ಮನಸ್ಸಿಗೊಂದು ಹೆಮ್ಮೆಯುಂಟಾಗುವುದಿಲ್ಲವೇ?” ಎಲ್ಲೋ ಒಂದೆಡೆ ಗೋಪಾಲಯ್ಯನವರ ಈ ನಿಲುವು ತುಸು ಅಹಂಭಾವದ್ದು ಎನಿಸಿದರೂ ಸಾತ್ವಿಕ ಅಹಮ್ಮಿಗೊಂದು ವಿನಾಯಿತಿಯೂ ಇದೆ. ಇದಕ್ಕೆ ತದ್ವಿರುದ್ಧವಾಗಿ ಪ್ರಕೃತಿಯೆದುರು ನಮ್ಮ ಸಾಮರ್ಥ್ಯ ಇರುವೆಯಷ್ಟೂ ಇಲ್ಲವೆಂದುಕೊಳ್ಳುವ ಶಿವರಾಮನದ್ದು ವಿನೀತ ಭಾವ.. ಈ ಎರಡು ಭಾವನೆಗಳ ಮಧ್ಯದೊಂದು ತಾಕಲಾಟವೇ ‘ಬೆಟ್ಟದ ಜೀವ’ ಕಾದಂಬರಿಯ ತಿರುಳೆಂದರೆ ತಪ್ಪಾಗದು. ಓದುಗರ ಗ್ರಹಣ ಸಾಮರ್ಥ್ಯ ಹಾಗೂ ಭಾವಕ್ಕೆ ತಕ್ಕಂತೆ ಗೋಪಾಲಯ್ಯನ ಬದುಕು ತಿಳಿವಿಗೆ ದಕ್ಕುತ್ತಾ ಹೋಗುತ್ತದೆ. ಯಾವುದೇ ವೈಭವೀಕರಣವಿಲ್ಲದೆ, ತಮ್ಮ ಅಪಾರ ಜೀವನಾನುಭವ, ಸೂಕ್ಷ್ಮ ಗಮನಿಸುವಿಕೆ, ಹಾಗೂ ವಾಸ್ತವಿಕ ನೆಲೆಯಲ್ಲಿಯೇ ಗೋಪಾಲಯ್ಯನವರ ಬದುಕನ್ನು ಮನಮುಟ್ಟುವಂತೆ ವಿವರಿಸುವ ಕಾರಂತರ ನಿರೂಪಣೆ ಅದೇ ಕಾರಣಕ್ಕೆ ಆಪ್ತವಾಗುವುದು ಮಾತ್ರವಲ್ಲ ಆಶ್ಚರ್ಯವನ್ನೂ ಹುಟ್ಟಿಸುತ್ತದೆ. ಗಂಭೀರ ಸಾಹಿತ್ಯಕ್ಕೆ ಹೆಸರಾದ ಕಾರಂತರು ಮನರಂಜನೆಯನ್ನು ಹಾಸ್ಯದ ಮೂಲಕ ಕಟ್ಟಿಕೊಡಲೂ ಹಿಂದೆ ಬೀಳುವುದಿಲ್ಲ. ಉದಾಹರಣೆಗೆ ಗೋಪಾಲಯ್ಯ ಬಟ್ಯ ಮತ್ತು ದೇರಣ್ಣರಿಗೆ ಶಿವರಾಮನನ್ನು ತಹಶೀಲ್ದಾರ್ ಎಂದು ಪರಿಚಯಿಸುವುದು.... ಕಾದಂಬರಿಯುದ್ದಕ್ಕೂ ಅವರು ಹಾಗೆಯೇ ಭಾವಿಸುವುದು ನಗೆಯುಕ್ಕಿಸುತ್ತದೆ. “ಆ ದಂಪತಿಗಳು ಒಬ್ಬರು ಇನ್ನೊಬ್ಬರಿಗೆ ಬಿಟ್ಟುಕೊಟ್ಟು ಬಾಳಿದವರೇ ಹೊರತು ಕಿತ್ತುಕೊಂಡು ಬಾಳಿದವರಲ್ಲ”. ಗೋಪಾಲಯ್ಯ ದಂಪತಿಗಳ ಪಾತ್ರ ಪೋಷಣೆಯೆಷ್ಟು ನವಿರಾಗಿವೆಯೆಂದು ತಿಳಿಸುವ ಮೇಲಿನ ಒಂದೇ ವಾಕ್ಯದಲ್ಲಿ ಎರಡು ಜೀವಗಳ ಅನ್ಯೋನ್ಯ ವೈವಾಹಿಕ ಸಂಬಂಧ ಸುಂದರವಾಗಿ ಅಭಿವ್ಯಕ್ತಗೊಳ್ಳುತ್ತದೆ. ಶಂಕರಮ್ಮನ ಜೋರು ದ್ವನಿ ಅತಿಥಿಯ ನಿದ್ದೆಗೆಡಿಸೀತೆಂದು ಗದರುವ ಗೋಪಾಲಯ್ಯ, “ನಿನ್ನ ಗಂಟಲೆಂದರೆ ದೇವರ ಕೋಣೆಯ ಶಂಖ”. ಅನ್ನುವುದು ಎಷ್ಟೊಂದು ಅರ್ಥಪೂರ್ಣ ಹಾಗೂ ಮಾರ್ಮಿಕ....! ಸತಿಪತಿಗಳ ಸರಸ ಸಂಭಾಷಣೆಯಲ್ಲಿ ಆಗಿನ ಸಮಾಜದಲ್ಲಿನ್ನೂ ಕಣ್ತೆರೆಯುತ್ತಿದ್ದ ಸ್ತ್ರೀ ಶೋಷಣೆಯ ವಿರುದ್ಧದ ಕೂಗಿನ ಸಣ್ಣ ಹೊಳಹೊಂದನ್ನೂ ಗಮನಿಸಬಹುದು. ಶಿವರಾಮಯ್ಯ ಪುಣೆಯಲ್ಲಿ ಕಂಡ ವ್ಯಕ್ತಿ ತನ್ನ ಮಗ ಶಂಬುವೆಂದು ತಿಳಿದಾಗ ಗೋಪಾಲಯ್ಯನವರು ಪುಣೆಗೆ ಹೊರಡಲು ಸಿದ್ಧರಾಗುತ್ತಾರೆ. ಪ್ರಕೃತಿಯೊಂದಿಗೆ ಬೆರೆತು, ತಾದಾತ್ಮ್ಯದಿಂದ ಬಾಳಿದವರಿಗೆ ನಾಲ್ಕು ದಿನಕ್ಕಾದರೂ ಅವೆಲ್ಲವನ್ನೂ ಬಿಟ್ಟು ಹೋಗಲು ‘ಕಾಲನ್ನು ಕಿತ್ತಿಡಬೇಕಾಯಿತೆಂದರೆ ಆ ಜೀವಕ್ಕದೆಷ್ಟು ಕಷ್ಟವಾಗಿರಬಹುದೆಂದು ಅರ್ಥಮಾಡಿಕೊಳ್ಳಬಹುದು. ಬೆಟ್ಟದ ರುದ್ರ ಪ್ರಕೃತಿಯೊಂದಿಗೆ ಸೆಣಸಿ, ತನ್ನಿಚ್ಛೆಯಂತೆ ಮಣಿಸಿ ರಮಣೀಯವಾಗಿಸಿದ್ದ ಗಟ್ಟಿ ಜೀವ ಗೋಪಾಲಯ್ಯನವರನ್ನು ಒಳಗೊಳಗೆ ಹಣ್ಣು ಮಾಡುವ ಕರುಳ ಕುಡಿಯೆಡಗಿನ ವ್ಯಾಮೋಹ ಮಾನವ ಸಹಜ ದೌರ್ಬಲ್ಯದ ಸಶಕ್ತ ಚಿತ್ರಣ. ಕೊನೆಗೂ ಕಾರಂತರು ಕಾದಂಬರಿಯಲ್ಲಿ ಗೋಪಾಲಯ್ಯನವರ ಮಗನ ಹುಡುಕಾಟಕ್ಕೊಂದು ತಾರ್ಕಿಕ ಅಂತ್ಯ ನೀಡದೆ ಮುಂದಿನದ್ದು ಓದುಗರ ಊಹೆಗೆ ಬಿಟ್ಟುಬಿಡುತ್ತಾರೆ. ಯಾಕೆಂದರೆ ಬದುಕಿರುವುದೇ ಹಾಗೆ. ಅನಿಶ್ಚಿತ ಹಾಗೂ ಅಪೂರ್ಣ. ಅಂತ್ಯವಾಗುವುದು ಸಾವಿನಲ್ಲಿ ಮಾತ್ರ... ಒಟ್ಟಿನಲ್ಲಿ ಪರಿವರ್ತನೆ ಪ್ರಕೃತಿ ಧರ್ಮವೇ ಆದರೂ, ಬದಲಾಗುತ್ತಿರುವ ಜೀವನ ಶೈಲಿ, ಅಭಿವೃದ್ಧಿಯ ಕಲ್ಪನೆಗಳು, ಮಾಯವಾಗುತ್ತಿರುವ ಬದುಕಿನ ಮೌಲ್ಯಗಳು... ತ್ರಿಶಂಕು ಸ್ಥಿತಿಯಲ್ಲಿರುವ ಗೋಪಾಲಯ್ಯನವರಂತಹ ಅಸಂಖ್ಯ 'ಬೆಟ್ಟದ ಜೀವ'ಗಳನ್ನು ಕಂಗೆಡಿಸದಿರಲಿ, ಹೊಂದಾಣಿಕೆಯ ಅನಿವಾರ್ಯತೆ ಉಸಿರು ಕಟ್ಟಿಸದಿರಲೆಂದು ಹಾರೈಸಬಹುದು ಅಷ್ಟೇ... ✍️ ಸಂಧ್ಯಾ ಭಟ್, ಅರಂತಾಡಿ
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ರುದ್ರ ರಮಣೀಯ ಬೆಟ್ಟದೊಂದಿಗೆ, ಕಾಡು ಪ್ರಾಣಿಗಳೊಂದಿಗೆ ಸೆಣಸಿ ಬದುಕುವ ಗೋಪಾಲಯ್ಯ, ಆಗಿನ್ನೂ ಸಮಾಜದಲ್ಲಿ ಕಣ್ತೆರೆಯುತ್ತಿದ್ದ ಸ್ತ್ರೀ ಸಂವೇದನೆಯ ಹೊಳಹಿಗೆ ಪ್ರತೀಕ ವಾಗುವ ಶಂಕರಿ, ಹೊಸ ಅನುಭವಗಳಿಗೆ ಅರಿವಿಗೆ ಸದಾ ತುಡಿಯುವ ಶಿವರಾಮಯ್ಯ, ಶ್ರಮಜೀವಿಗಳಾದ ದೇರಣ್ಣ, ಭಟ್ಯ, ಗೋಪಾಲಯ್ಯ ಪ್ರೀತಿಯಿಂದ ಸಾಕಿದ ನಾರಾಯಣ ಮತ್ತವನ ಹೆಂಡತಿ, ಮಾಡಬಾರದ್ದು ಮಾಡಿ, ಓಡಿಹೋಗಿ, ಹೆತ್ತವರ ಕಣ್ಣೀರಿಗೆ ಕಾರಣವಾದ ಶಂಭು, ಎಲ್ಲಾ ಪಾತ್ರಗಳೂ ಮನಕ್ಕೆ ಆಪ್ತವಾಗುತ್ತವೆ. ದನವನ್ನು ಹಿಡಿದು ತಿನ್ನುವ ಹುಲಿಯ ಶಿಕಾರಿಯಂತೂ ಓದುಗರಿಗೆ ಒಂದು ರೋಚಕ ಅನುಭವವನ್ನು ಕಟ್ಟಿಕೊಡುತ್ತದೆ. ಕೊನೆಗೂ ಹುಲಿಯನ್ನು ಸಾಯಿಸುವಲ್ಲಿ ಯಶಸ್ವಿಯಾಗುವ ಗೋಪಾಲಯ್ಯ ಮಗ ಶಂಭುವನ್ನು ಹುಡುಕಿಕೊಂಡು ಬರುವಲ್ಲಿಯೂ ಯಶಸ್ಸು ಸಾಧಿಸುತ್ತಾರೆನ್ನುವ ಆಶಯದಂತೆ ಕಾದಂಬರಿ ಮುಕ್ತಾಯವನ್ನು ಪಡೆಯುವುದು ಅಪೂರ್ಣ ಎನಿಸಿದರೂ ಒಂದು ಧನಾತ್ಮಕ ಅನುಭೂತಿಯನ್ನು ನೀಡುವುದು ಸತ್ಯ. ಅವರು ಮೈಕೊಡವಿದರೆ ಆಗುವ ಕೆಲಸ ನನ್ನಿಂದ ನಾಲ್ಕು ದಿನ ದುಡಿದರೂ ಅಗದು” ಎನ್ನುವ ಕೆಲಸದಾಳು ಬಟ್ಯನ ಮಾತು ಗೋಪಾಲಯ್ಯನ ವ್ಯಕ್ತಿತ್ವವನ್ನು ಬಹಳ ಸಮರ್ಪಕವಾಗಿ ಪ್ರತಿಬಿಂಬಿಸುತ್ತದೆ. ಶಿವರಾಮನನ್ನು ತಹಶೀಲ್ದಾರನೆಂದು ಪರಿಚಯಿಸುವುದು. ಹುಲಿಗಾಗಿ ನಾಯಿಯನ್ನು ಒಳಗಿಡುವ ಸನ್ನಿವೇಶ, ಗೋಪಾಲಯ್ಯ ದಂಪತಿಗಳ ಸರಸ ಸಂಭಾಷಣೆ, ಹುಸಿ ಜಗಳಗಳು, ಬಟ್ಯನ ಮುಗ್ದತೆ...ಇತ್ಯಾದಿಗಳು ಓದುಗರ ತುಟಿಯಂಚಿನಲ್ಲಿ ನಗೆ ಅರಳಿಸಲು ಸಫಲವಾಗುತ್ತವೆ. ಜಾತಿ, ವರ್ಗ, ಲಿಂಗಗಳ ಅಂತರವಿಲ್ಲದೆ ಬಟ್ಯ, ದೇರಣ್ಣನಂತಹವರ ಜೊತೆಗೆ ಒಳ್ಳೆಯ ಸಂಬಂಧವಿರಿಸಿಕೊಂಡ ಗೋಪಾಲಯ್ಯ ತಮ್ಮ ಸ್ವಾರ್ಥವಿದ್ದರೂ ಅವರ ಬದುಕಿಗೂ ದಾರಿ ಮಾಡಿಕೊಡಲು ಮರೆಯುವುದಿಲ್ಲ. "ಲಕ್ಷ್ಮೀ ದನವನ್ನು ಹುಲಿ ಹಿಡಿದ ಹಾಗೆ ಯಾವುದೋ ಹೆಣ್ಣು ಹುಲಿ ಮಗನನ್ನು ಹಿಡಿದಿದೆ’ ಎನ್ನುವ ಹೋಲಿಕೆ... ಮಗ ಶಂಭು ಜೀವನದಲ್ಲಿ ನಡೆದಿರಬಹುದಾದ್ದನ್ನು ಅವರು ಊಹಿಸಿದ್ದರು ಎಂಬುದಕ್ಕೆ ಸಾಕ್ಷಿ. ಕಾಟುಮೂಲೆ ಮತ್ತು ನೀರ್ಕಟ್ಟೆಯಂತಹ ಪ್ರಯೋಜನಕ್ಕೆ ಬಾರದ ಬಂಡೆ ಕಲ್ಲುಗಳ ನೀರಿನ ಸೆಲೆಯಿರುವ ಪ್ರದೇಶಗಳನ್ನು ಕೃಷಿ ಯೋಗ್ಯ ಭೂಮಿಯನ್ನಾಗಿಸಿದ ಗೋಪಾಲಯ್ಯನಿಗೆ ಕೊನೆಗೂ ಉಳಿಯುವುದು ಪುತ್ರಶೋಕ ಮಾತ್ರ. ಬೆಟ್ಟದಷ್ಟೇ ನಿರೀಕ್ಷೆಗಳನ್ನು ಹೊತ್ತ ಮಹಾತ್ವಕಾಂಕ್ಷಿಯೊಬ್ಬನ ಸಾಧನೆಗಳ ಪ್ರತೀಕವಾದ ಗೋಪಾಲಯ್ಯನಿಗೆ ಮಗನನ್ನು ಶಾಶ್ವತವಾಗಿ ಕಳೆದುಕೊಳ್ಳುವ ಆತಂಕ, ಭಯ... ಅದನ್ನು ತೋರಿಸಿಕೊಳ್ಳದೆ ನಿರಂತರವಾಗಿ ಬದುಕಿನಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಅವರ ಮನದಾಳದ ನೋವಿಗಿದ್ದ ಏಕೈಕ ಸಾಂತ್ವನವೆಂದರೆ ಅದು ಮಡದಿ ಶಂಕರಿ. ಮಗನ ಬಗೆಗಿರುವ ಅದಮ್ಯ ಆಸೆ, ನಿರೀಕ್ಷೆಗಳನ್ನು ಉಪೇಕ್ಷಿಸಲಾಗದೆ ಒಳಗೊಳಗೆ ಬೇಯುವ ಚಿತ್ರಣ ಕಣ್ಣಂಚನ್ನು ಹಸಿಯಾಗುತ್ತದೆ. "ನಮ್ಮ ಸರ್ವ ಭವಿಷ್ಯಕ್ಕೂ ,ನಮ್ಮ ಹೆಣ ಹೊರಲಿಕ್ಕೆ ಆಗಲಿ, ಪಿಂಡ ಹಾಕಲಿಕ್ಕೇ ಆಗಲಿ, ನಾರಾಯಣನೇ ಗತಿ. ಅವನು ಅಷ್ಟನ್ನು ಮಾಡಿಯಾನು. ಮಾಡಿದರೆ ನಮ್ಮ ಪ್ರೇತಕ್ಕೂ ತೃಪ್ತಿಯಾದೀತು. ಬದಲು ವಂಶದ ಮಗನು ಬಂದು ಶ್ರಾದ್ಧ ಮಾಡಿದರೂ ನನಗೆ ಬೇಕಿಲ್ಲ” ಎನ್ನುವ ಮಾತುಗಳು ಗೋಪಾಲಯ್ಯನ ಮನದ ನೋವು ಹಾಗೂ ನಾರಾಯಣನಲ್ಲಿಟ್ಟಿರುವ ಭರವಸೆಯನ್ನು ಪ್ರತಿಬಿಂಬಿಸುತ್ತದೆ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಪ್ರಕೃತಿ ಪ್ರಿಯರಿಗೆ, ಹೊಸ ವಿಷಯಗಳನ್ನು, ವಿಶಿಷ್ಟ ಜೀವನ ಶೈಲಿಯನ್ನು ತಿಳಿದುಕೊಳ್ಳುವ ಆಸಕ್ತಿ ಇರುವವರಿಗೆ, ಬದುಕಿನ ಕಟು ವಾಸ್ತವವನ್ನು ಒಪ್ಪಿಕೊಂಡು, ಸವಾಲುಗಳಿಗೆ ಮುಖಾಮುಖಿಯಾಗಿ ಸೆಣಸಿ, ಗೆಲುವು ಕಾಣಲು ಇಚ್ಚಿಸುವ ಓದುಗರಿಗೆ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.